ಒಂದೊಂದು ಸಿನಿಮಾ ಪ್ರದರ್ಶನದ್ದು ಒಂದೊಂದು ವಿಶೇಷತೆ.

ಒಂದೊಂದು ಸಿನಿಮಾ ಪ್ರದರ್ಶನದ್ದು ಒಂದೊಂದು ವಿಶೇಷತೆ.

   ಪ್ರಸ್ತುತ ಸಮಯದಲ್ಲಿ ಅದೆಂತಹ ದೊಡ್ಡ ಹೀರೋ ಸಿನಿಮಾ ಆದರೂ ಮೂರು ದಿನದ ಅಬ್ಬರ- ಆಡಂಬರ ಅಷ್ಟೇ! ಶುಕ್ರವಾರ ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಶೋನಲ್ಲಿ ಅಭಿಮಾನಿಗಳ ಆರ್ಭಟ ಜೋರಾಗಿರುತ್ತದೆ. ಸಿನಿಮಾ ಚೆನ್ನಾಗಿದೆ ಅಂತ ಅಭಿಪ್ರಾಯ ಬಂದರೆ ಮಾತ್ರ, ಶನಿವಾರ-ಭಾನುವಾರದ ವರೆಗೂ ಚಿತ್ರಮಂದಿರ ಭರ್ತಿಯಾಗಿದೆ ಅಂತ ಬೋರ್ಡ್ ಕಾಣಸಿಗುತ್ತದೆ. ಇಲ್ಲವಾದರೆ ಶುಕ್ರವಾರದ ಮ್ಯಾಟ್ನಿ ಶೋಗೆ ಜನ ಇಲ್ಲದೆ, ಥಿಯೇಟರ್ ಗಳು ಭಣಗುಡುತ್ತಿರುತ್ತದೆ. ಏನೇ ಆದರೂ, ಸೋಮವಾರದಿಂದ ಎಂತಹ ಸಿನಿಮಾ ತೆಗೆದುಕೊಂಡರೂ ಸಾದಾ ಸೀದಾ ಪ್ರದರ್ಶನ. ಹದಿನೈದು ದಿನಕ್ಕೆಲ್ಲಾ OTT ನಲ್ಲಿ, ತಿಂಗಳಿಗೆಲ್ಲಾ ಹೊಚ್ಚ ಹೊಸ ಚಲನಚಿತ್ರ ಅಂತ ಟಿವಿಗಳಲ್ಲಿ ಬಂದು ಬಿಡುತ್ತದೆ. ಈಗಂತೂ ಅನೇಕರು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಮಾಡುವ ರಿಸ್ಕ್ ಬೇಡ ಅಂತ ಹೇಳಿ, ನೇರವಾಗಿ OTT ನಲ್ಲೆ ರಿಲೀಸ್ ಮಾಡಿ ಬಿಡುತ್ತಿದ್ದಾರೆ. ದೊಡ್ಡ ಚಿತ್ರಗಳ ಕಥೆಯೇ ಹೀಗೆ ಇರಬೇಕಾದರೆ, ಇನ್ನು ಹೊಸಬರ ಚಿತ್ರಗಳ ಬಗ್ಗೆ ಹೇಳುವುದೇ ಬೇಡ. ಮೊದಲ ದಿನದ ಮಾರ್ನಿಂಗ್ ಶೋ ತುಂಬಿಸಲು ಅವರೇ ಹೊರಗೆ ನಿಂತು ಜನರನ್ನು ಕರೆದು ಕರೆದು ಟಿಕೆಟ್ ಉಚಿತವಾಗಿ ಹಂಚುತ್ತಾರೆ. ಒಟ್ಟಿನಲ್ಲಿ ರಿಲೀಸ್ ಆದ ಮೊದಲ ದಿನದ ಮಾರ್ನಿಂಗ್ ಶೋ ಹೌಸ್ ಫುಲ್ ಬೋರ್ಡ್ ಬೀಳಲೇಬೇಕು ಎಂಬ ಹಠ ಎಲ್ಲರಲ್ಲೂ ಇದೆ.
   ಯಾವುದೇ ಸಿನಿಮಾ ತೆಗೆದುಕೊಂಡರು, ಬಿಡುಗಡೆಯಾದ ಮೂರೇ ದಿನಕ್ಕೆ ಚಿತ್ರತಂಡಗಳು ಪ್ರೆಸ್ ಮೀಟ್ ಮಾಡಿ, ಸೂಪರ್ ಹಿಟ್ ಅಂತ ಹೇಳಿಕೆ  ಕೊಡ್ತಾರೆ. ಗಲ್ಲಾ ಪೆಟ್ಟಿಗೆಯ ವಿಷಯ ಹೇಳುವಂತೆಯೇ ಇಲ್ಲ. ಕೋಟಿ ಕೋಟಿ ಲೆಕ್ಕ. ಒಂದಷ್ಟು ದಿನ ಕಳೆದ ಮೇಲೆ ನಿಧಾನವಾಗಿ ಚಿತ್ರ ಮಾಡಿ, ಸುಧಾರಿಸಿಕೊಂಡ ನಿರ್ಮಾಪಕ ನಷ್ಟದ ಲೆಕ್ಕ ಕೊಡುತ್ತಾನೆ. ಇದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ನಿರ್ದೇಶಕ ನಟ-ನಟಿಯರು ವರ್ತಿಸುತ್ತಾರೆ. ಇದು ಪ್ರಸ್ತುತ ಮೇಲ್ನೋಟಕ್ಕೆ ಕಂಡುಬರುವ ಪರಿಸ್ಥಿತಿ.
     ತೀರ 2000 ಇಸವಿಯವರೆಗೂ ನೀವು ಗಮನಿಸಿದಂತೆ 'ಕನ್ನಡಪ್ರಭ' 'ಉದಯವಾಣಿ' ದಿನಪತ್ರಿಕೆಗಳಲ್ಲಿ, ಶುಕ್ರವಾರದ ಒಂದು ಇಡೀ ಪುಟ ತುಂಬಾ ಚಿತ್ರದ ಬಿಡುಗಡೆಯ ಜಾಹಿರಾತು ಕಾಣುತ್ತಿತ್ತು. ದೊಡ್ಡ ದೊಡ್ಡ ಅಕ್ಷರಗಳಲ್ಲಿ ಚಿತ್ರಮಂದಿರಗಳ ಹೆಸರುಗಳು, ಆ ಇಡೀ ಜಾಹೀರಾತಿನ ತುಂಬಾ ಎದ್ದು ಕಾಣುತ್ತಿತ್ತು. ಪುಟಗಟ್ಟಲೆ ಸಿನಿಮಾದ ಜಾಹೀರಾತುಗಳು ಎದ್ದು ಕಾಣುತ್ತಿದ್ದವು. ಬಹುತೇಕ ನಾಲ್ಕು ವಾರದವರೆಗೂ ಹೆಚ್ಚು ಕಡಿಮೆ ಅಷ್ಟೇ ಚಿತ್ರಮಂದಿರಗಳ ಜಾಹೀರಾತು ಮುಂದುವರಿಯುತ್ತಿತ್ತು. ನಂತರ ಕ್ರಮೇಣ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಬಹುತೇಕ 'ಬಿ' ಸೆಂಟರ್ ಗಳಲ್ಲಿ ಸಿನಿಮಾಗಳು ನಾಲ್ಕು ವಾರದ ಮೇಲೆ ಓಡುತ್ತಿರಲಿಲ್ಲ. ನಾಲ್ಕು ವಾರ 'ಬಿ' ಸೆಂಟರ್ ಗಳಲ್ಲಿ ಸಿನಿಮಾ ಪ್ರದರ್ಶನಗೊಂಡರೆ ಅದು ಸೂಪರ್ ಹಿಟ್ ಅಂತಲೇ ಪರಿಗಣಿಸುತ್ತಿದ್ದರು
   ಕೆಲವೊಮ್ಮೆ 'ಬಿ' ಸೆಂಟರ್ ಗಳಲ್ಲಿ ಕೂಡ ಚಿತ್ರಗಳು 50 ದಿನ ಪ್ರದರ್ಶನ ಕೆಲವೊಮ್ಮೆ 100 ದಿನ ಪ್ರದರ್ಶನ ಕಂಡಿದ್ದೂ ಇದೆ. ಬಹುತೇಕ ಯಾವ ಚಿತ್ರಮಂದಿರಗಳಲ್ಲಿ ನಾಲ್ಕು ವಾರ ಚಿತ್ರ ಪೂರೈಸಿದ ಮೇಲೂ ಪ್ರದರ್ಶನಗೊಳ್ಳುತ್ತಿದ್ದ ಚಿತ್ರಮಂದಿರಗಳಲ್ಲಿ 50 ದಿನ ವರೆಗೂ ಚಿತ್ರ ಪ್ರದರ್ಶನವಾಗುವುದು ಖಚಿತವಾಗಿರುತ್ತಿತ್ತು. ಅಭಿಮಾನಿಗಳು ಕೂಡ ಇಷ್ಟು ಕೇಂದ್ರಗಳಲ್ಲಿ 50 ದಿನ ಪ್ರದರ್ಶನಗೊಳ್ಳುತ್ತದೆ ಅಂತ ಆಗಲೇ ಲೆಕ್ಕ ಹಾಕಿ,  ಸಂಭ್ರಮಿಸಿ ಬಿಡೋರು. ಇನ್ನು 50 ದಿನ ಪೂರ್ಣಗೊಂಡರೆ ಅದೊಂದು ಹಬ್ಬ. ಅಭಿಮಾನಿಗಳ ಸಂಘಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು. ಇನ್ನು ಚಿತ್ರ 50 ದಿನಗಳ ನಂತರ ಬಹುತೇಕ ಚಿತ್ರಮಂದಿರಗಳಿಂದ ಮರೆಯಾಗುತ್ತಿತ್ತು. ಆದರೂ ಕೆಲವು ಚಿತ್ರಮಂದಿರಗಳಲ್ಲಿ ಚಿತ್ರದ ಯಶಸ್ವಿ ಪ್ರದರ್ಶನ ಮುಂದುವರಿಯುತ್ತಿತ್ತು. 
     10 -11 ನೇ ವಾರ ಬಂದ ತಕ್ಷಣ ಚಿತ್ರ ಎಷ್ಟು ಕೇಂದ್ರಗಳಲ್ಲಿ ನೂರು ದಿನ ಪ್ರದರ್ಶನ ಕಾಣಬಹುದು? ಅಂತ ಆ ನಾಯಕ ನಟನ ಅಭಿಮಾನಿಗಳು ,ಅಷ್ಟೇ ಅಲ್ಲ ಆತನ ಪ್ರತಿಸ್ಪರ್ಧಿಗಳ ಸಂಘಗಳು ಕೂಡ ಆಲೋಚನೆ ಮಾಡುತ್ತಿದ್ದವು. 100 ಡೇಸ್ ಓಡಿಸಲೇಬೇಕೆಂದು ಅಭಿಮಾನಿಗಳಿಂದ ಒತ್ತಡ. ಕೆಲವೊಂದು ಸಂದರ್ಭಗಳಲ್ಲಿ 12-13 ವಾರಕ್ಕೆ ಚಿತ್ರ ಎತ್ತಂಗಡಿ ಮಾಡುವ ಸಂದರ್ಭಗಳು ಪ್ರದರ್ಶಕರಿಗೆ ಎದುರಾಗುತ್ತಿತ್ತು. ಆದರೆ ಇಂತಹ ಸಮಯದಲ್ಲಿ ಅಭಿಮಾನಿ ಸಂಘಗಳು ರೊಚ್ಚಿಗೆದ್ದು, ನಿರ್ಮಾಪಕರಗಳ ಮೇಲೆ ಸಿನಿಮಾ ತೆಗೆಯದಂತೆ ಒತ್ತಡ ತರುತ್ತಿದ್ದರು. ಅಲ್ಲದೆ ಪ್ರತಿ ಹೀರೋಗೂ ಚಿತ್ರ 100 ದಿನ ಓಡುವುದು ಪ್ರತಿಷ್ಠೆಯ ವಿಷಯವಾಗಿ ಇರುತ್ತಿತ್ತು. ಹಾಗಾಗಿ ಕೆಲವೊಂದು ಸಂದರ್ಭದಲ್ಲಿ ನಿರ್ಮಾಪಕರು ಹೀರೋಗಳ ಕಾಲ್ ಶೀಟ್ ಅನ್ನು ಮುಂದೆ ಪಡೆಯಬೇಕಾದ ದೃಷ್ಟಿಯಿಂದಾದರೂ 100 ಡೇಸ್ ಪೂರೈಸುವಂತೆ ನೋಡಿ ಕೊಳ್ಳಬೇಕಾಗುತ್ತಿತ್ತು. 
   ಅಂತಹ ಸಮಯದಲ್ಲಿ ದೊಡ್ಡ ಚಿತ್ರಮಂದಿರದಿಂದ ಸಣ್ಣ ಚಿತ್ರಮಂದಿರಕ್ಕೆ ಚಿತ್ರವನ್ನು ಶಿಫ್ಟ್ ಮಾಡ್ತಾ ಇದ್ರು. ಉದಾಹರಣೆಗೆ 'ಸಂತೋಷ್' ಚಿತ್ರಮಂದಿರದಲ್ಲಿ 12 ವಾರ ಪ್ರದರ್ಶನ ಕಂಡ ಚಿತ್ರ, ಬೇರೆ ಚಿತ್ರಕ್ಕೆ ಬಿಟ್ಟು ಕೊಡಬೇಕಾದ ಪ್ರಸಂಗ ಬಂದಾಗ, ಪಕ್ಕದಲ್ಲಿದ್ದ 'ಸಪ್ನಾ' ಚಿತ್ರಮಂದಿರಕ್ಕೆ ಈ ಚಿತ್ರವನ್ನು ಶಿಫ್ಟ್ ಮಾಡಿ 100 ಡೇಸ್ ಪೂರ್ಣಗೊಳಿಸುತ್ತಿದ್ದರು. ಹಾಗಂತ ಎಲ್ಲಾ ಸಂದರ್ಭದಲ್ಲೂ ಚಲನಚಿತ್ರಗಳು ಹೀಗೆ ಒತ್ತಡದಿಂದ 100 ಡೇಸ್ ಪೂರೈಸುತ್ತಿತ್ತು ಅಂತಲ್ಲ. ನೇರವಾಗಿ ಒಂದೇ ಕೇಂದ್ರದಲ್ಲಿ 100 ದಿನ ಪ್ರದರ್ಶನವು ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಿದ್ದವು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅನಿವಾರ್ಯ ಕಾರಣಗಳಿಗಾಗಿ ಇಂತಹ ಪ್ರಸಂಗಗಳು ಎದುರಾದಾಗ ನಿರ್ಮಾಪಕರ, ವಿತರಕರ ಮತ್ತು ಪ್ರದರ್ಶಕರ ಮೇಲೆ ಇಂತಹ ಒತ್ತಡಗಳು ಬರುತ್ತಿದ್ದವು.

Leave a Reply

Your email address will not be published.